City News Political

ಧರಮ್ ಸಿಂಗ್ ಅವರ ಸಾವಿಗೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಕಾರಣ:ಬಿಎಸ್ ಯಡಿಯೂರಪ್ಪ ಆಪಾದನೆ

ಬೆಂಗಳೂರು : ನಂಬಿಕೆ ದ್ರೋಹ ಮಾಡುವುದು ನಿಮ್ಮ ರಕ್ತದಲ್ಲಿಯೇ ಇದೆ, ನೀವು ನಿಮ್ಮ ತಂದೆ ಇಬ್ಬರೂ ಅದನ್ನೇ ಮಾಡಿದ್ದೀರಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ಸದನದಲ್ಲಿ ಆರೋಪಿಸಿದರು.
ಇದಕ್ಕೆ ಸದನದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.

ಯಡಿಯೂರಪ್ಪ ಅವರು ಹಿರಿಯರಾಗಿ ಅಸಂವಿಧಾನಿಕ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದರೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಜೊತೆಗೆ ತಮ್ಮ ಕುಟುಂಬದ ರಕ್ತದ ಮೇಲೆ ಮಾತನಾಡುವ ಹಕ್ಕನ್ನು ಯಾರು ನೀಡಿದರು ಎಂದು ಎಚ್ ಡಿ ಕೆ ಪ್ರಶ್ನಿಸಿದರು.

ಇಂದು ಮುಂಜಾನೆಯಿಂದ ಆರಂಭವಾದ ಸದನದಲ್ಲಿ ಮಾಜಿ ಮತ್ತು ಹಾಲಿ ಸಿಎಂ ನಡುವೆ ಮಾತಿನ ಚಕಮಕಿ ನಡೆಯಿತು. 2004 ರಿಂದ 2006 ರವರೆಗೆ ಮುಖ್ಯಮಂತ್ರಿಯಾಗಿದ್ದ ದಿವಂಗತ ಧರಮ್ ಸಿಂಗ್ ಅವರಿಗೆ ಮೋಸ ಮಾಡಿ ಅವರಿಗೆ ಬೇಸರ ಉಂಟು ಮಾಡಿದ ಕುಮಾರಸ್ವಾಮಿಯವರ ಜೊತೆ ಈಗ ಕಾಂಗ್ರೆಸ್ ಕೈಜೋಡಿಸಿದೆ ಎಂದು ಬಿಎಸ್ ಯಡಿಯೂರಪ್ಪ ಆರೋಪಿಸಿದರು.

ಅದಕ್ಕಿಂತ ಒಂದು ಹೆಜ್ಜೆ ಮುಂದುವರೆದ ಯಡಿಯೂರಪ್ಪ, ಧರಮ್ ಸಿಂಗ್ ಅವರ ಸಾವಿಗೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಕಾರಣ ಎಂದು ಆರೋಪಿಸಿದರು. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದರು.

ನಂತರ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ಪ್ರವೇಶಿಸಿ, ಈ ರೀತಿ ಆರೋಪ ಮಾಡುವುದು ತಪ್ಪು ಎಂದು ಯಡಿಯೂರಪ್ಪ ಅವರಿಗೆ ಹೇಳಿದರು. ಒಟ್ಟಿನಲ್ಲಿ ಬೆಳಗ್ಗಿನಿಂದ ನಡೆದ ಸದನದಲ್ಲಿ ಆರೋಪ ಪ್ರತ್ಯಾರೋಪಗಳನ್ನು ಬಿಟ್ಟರೆ, ರಾಜ್ಯದ ಜನರ ಹಿತ ಕಾಯುವ ಬಗ್ಗೆ ಯಾವುದೇ ಮಾತುಗಳೇ ಬರಲಿಲ್ಲ.

Advertisements