City News Political

ಕಾಂಗ್ರೆಸ್ ಗೆ ದಿನೇಶ್ ಗುಂಡೂರಾವ್ ಹೊಸ ಸಾರಥಿ

ಬೆಂಗಳೂರು- ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕಾಂಗ್ರೆಸ್‌ನ ಸಾರಥ್ಯ ವಹಿಸಲಾಗಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಲು ಹಿರಿಯ ನಾಯಕರ ಮಧ್ಯೆ ನಡೆದಿದ್ದ ಪೈಪೋಟಿ ನಡುವೆ ಶಾಸಕ ದಿನೇಶ್ ಗೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಮಾಜಿ ಸಚಿವ ಈಶ್ವರ ಖಂಡ್ರೇ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ದೆಹಲಿ ನಾಯಕರು ಸಂಜೆ ಹೊಸ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಲು ಸಂಸದ ಕೆ.ಹೆಚ್. ಮುನಿಯಪ್ಪ, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಸಚಿವರಾದ ಡಿ.ಕೆ. ಶಿವಕುಮಾರ್, ಹಿರಿಯ ನಾಯಕರುಗಳಾದ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಟಿ.ಬಿ. ಜಯಚಂದ್ರ ಸೇರಿದಂತೆ ಹಿರಿಯ ನಾಯಕರ ದಂಡೇ ಸಾಲಿನಲ್ಲಿತ್ತು.

ಅದಕ್ಕಾಗಿ ಹಿರಿಯ ನಾಯಕರುಗಳು ಹೈಕಮಾಂಡ್‌ನಲ್ಲಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಶತಪ್ರಯತ್ನ ನಡೆಸಿದ್ದರು.

ಆದರೆ ಪಕ್ಷದ ವರಿಷ್ಠರು ಹಿರಿಯರಿಗೆ ಮಣೆ ಹಾಕದೆ ಕಿರಿಯರಿಗೆ ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದು, ಅದರಂತೆ ಮಾಜಿ ಸಚಿವ ಹಾಲಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಲಿದ್ದಾರೆ.

ಇವರ ಜೊತೆಗೆ ಮಾಜಿ ಸಚಿವ ಈಶ್ವರಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ.

ಪ್ರದೇಶ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ನೇಮಕ ಸಂಬಂಧ ಎಐಸಿಸಿ ಯಾವುದೇ ಕ್ಷಣದಲ್ಲಿ ಆದೇಶ ಹೊರಡಿಸಲಿದೆ.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾದ ನಂತರ ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲು ಹೈಕಮಾಂಡ್ ತೀರ್ಮಾನಿಸಿತ್ತು. ಅದರಂತೆ ಈಗ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಎಲ್ಲ ಪ್ರಮುಖ ಮುಖಂಡರೊಡನೆ ಸಮಾಲೋಚಿಸಿದ ನಂತರವೇ ಅಧ್ಯಕ್ಷರಾಗಿ ದಿನೇಶ್‌ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷರಾಗಿ ಈಶ್ವರಖಂಡ್ರೆಯವರನ್ನು ನೇಮಿಸಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

Advertisements