City News Political

3 ದಿನದ ಯಡಿಯೂರಪ್ಪ ಸರ್ಕಾರ ಪತನ, ಕಾಂಗ್ರೆಸ್-ಜೆಡಿಎಸ್ ಮೈತ್ರಿಪರ್ವ ಆರಂಭ

ಬೆಂಗಳೂರು, ಮೇ 19- ಬಹುಮತ ಸಾಬೀತಿಗೆ ಅಗತ್ಯ ಶಾಸಕರ ಬೆಂಬಲ ದೊರೆಯದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ ಲಭಿಸಿದಂತಾಗಿದೆ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿ ವಿಶ್ವಾಸಮತ ಸಾಬೀತುಪಡಿಸಲು 15 ದಿನಗಳ ಗಡುವು ನೀಡಿದ್ದರು.

ಆದರೆ, ಕಾಂಗ್ರೆಸ್‍ನವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರಿಂದ ಬಿ.ಎಸ್.ಯಡಿಯೂರಪ್ಪ ಅವರು ಇಂದೇ ಬಹುಮತ ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಹೈದರಾಬಾದ್ ರೆಸಾರ್ಟ್‍ಗೆ ತೆರಳಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಪ್ರತಾಪ್‍ಗೌಡ್ ಪಾಟೀಲ ಮತ್ತು ಆನಂದ್‍ಸಿಂಗ್ ಅವರು ಗೈರು ಹಾಜರಾಗಿದ್ದರು.
ಈ ಇಬ್ಬರು ಶಾಸಕರನ್ನು ಕರೆತರಲು ಕಾಂಗ್ರೆಸಿಗರು ಹರಸಾಹಸ ನಡೆಸಿದ್ದರು. ಅಂತಿಮವಾಗಿ ಬಿಜೆಪಿ ತನಗೆ ಅಗತ್ಯವಿರುವ ಏಳು ಶಾಸಕರನ್ನು ಒಗ್ಗೂಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸುವ ಗೋಜಿಗೆ ಹೋಗದೆ ಕೇವಲ ಭಾಷಣ ಮಾಡಿ ತಮ್ಮ ಅಳಲು ತೋಡಿಕೊಂಡು ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಈ ಬೆಳವಣಿಗೆಯಿಂದ ಬಿಜೆಪಿ ಸರ್ಕಾರ ರಚನೆ ಕನಸನ್ನು ಕೈಬಿಟ್ಟಂತಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಜಯ ಲಭಿಸಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ 25ನೆ ಮುಖ್ಯಮಂತ್ರಿಯಾಗಿ ಒಂದೆರಡು ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.

Advertisements