City News Political

ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ

ಬೆಂಗಳೂರು(ಮೇ 19): ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಮೂರು ದಿನದೊಳಗಾಗಿಯೇ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಶ್ವಾಸಮತ ಯಾಚನೆ ನಿರ್ಣಯಕ್ಕೂ ಮುನ್ನವೇ ಯಡಿಯೂರಪ್ಪ ರಾಜೀನಾಮೆ ಕೊಟ್ಟರು. ಇದರೊಂದಿಗೆ ಅವರ 55 ಗಂಟೆಗಳ ಆಡಳಿತ ಅಂತ್ಯಗೊಂಡಿತು.

ಬಹುಮತ ಸಾಬೀತು ಪಡಿಸಲು ಬೇಕಾದ ಸಂಖ್ಯೆಯಲ್ಲಿ ಕೊರತೆ ಬಂದ ಕಾರಣ ಯಡಿಯೂರಪ್ಪ ರಾಜೀನಾಮೆ ಕೊಡುವುದು ಅನಿವಾರ್ಯವಾಯಿತು. ಇಂದು ರಾಜೀನಾಮೆ ಸಲ್ಲಿಸುವ ಮುನ್ನ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಭಾವಪೂರ್ಣ ಭಾಷಣ ಮಾಡಿದರು. ತಾವು ಹೋರಾಟ ಮಾಡಿಕೊಂಡು ಬಂದಿದ್ದು, ಮುಂದೆಯೂ ಹೋರಾಟ ಮಾಡುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಎಸ್ವೈ ಎಚ್ಚರಿಕೆ ನೀಡಿದರು.

ವಿಧಾನಸಭಾ ಚುನಾವಣೆಯಲ್ಲಿ ತಮ್ಮದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಮಗೆ ಸರ್ಕಾರ ನೀಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಚುನಾವಣೆ ಫಲಿತಾಂಶ ಬಂದ ದಿನವೇ ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಸರಕಾರ ರಚನೆಗೆ ಮಾಡಿಕೊಂಡ ಮನವಿಗೆ ರಾಜ್ಯಪಾಲರು ಕಿವಿಗೊಡದೆ, ಬಿಎಸ್ವೈಗೆ ಸರಕಾರ ರಚನೆಗೆ ಆಹ್ವಾನಿಸಿದರು. ಆದರೆ ಅಚ್ಚರಿ ಹುಟ್ಟಿಸಿದ್ದು ರಾಜ್ಯಪಾಲ ವಜುಭಾಯ್ ವಾಲಾ ಅವರು ಬಹುಮತ ಸಾಬೀತಿಗೆ ಬಿಎಸ್ವೈಗೆ 15ದಿನಗಳ ಕಾಲಾವಕಾಶ ಕೊಟ್ಟಿದ್ದು. ಆದರೆ, ಕೂಡಲೇ ವಿಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋದವು. ಬಿಎಸ್ವೈ ಸರಕಾರವನ್ನು ಅಮಾನ್ಯಗೊಳಿಸಲು ಸುಪ್ರೀಂಕೋರ್ಟ್ ಒಪ್ಪದೇ ಇದ್ದರೂ, ಬಹುಮತ ಸಾಬೀತಿಗೆ ಇದ್ದ 15 ದಿನಗಳ ಕಾಲಾವಧಿಯನ್ನು ಒಂದು ದಿನಕ್ಕೆ ಇಳಿಸಿತು. ಈ ವೇಳೆ, ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆತ್ಮಸಾಕ್ಷಿಯಾಗಿ ಮತ ಹಾಕುವಂತೆ ಮನವಿ ಮಾಡಿಕೊಂಡರು. ಆದರೆ, ಅವರಿಗೆ ಅಗತ್ಯವಿದ್ದ ಸಂಖ್ಯಾಬಲ ಬರಲಿಲ್ಲ.