Sports

ಕೊನೆಯ ಲೀಗ್ ಪಂದ್ಯದಲ್ಲಿ ಪ್ಲೇ ಆಫ್ ಅವಕಾಶ ಕೈಚೆಲ್ಲಿದ ಆರ್ಸಿಬಿ: ಆರ್ಆರ್ ಬೌಲಿಂಗ್ ದಾಳಿಗೆ ಕೊಹ್ಲಿ ಪಡೆ ಉಡೀಸ್

ಜೈಪುರ (ಮೇ. 19): ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ತಂಡ ಜಯ ಸಾಧಿಸಿದೆ. 30 ರನ್ಗಳ ಭರ್ಜರಿ ಗೆಲುವುಂಡ ರಹಾನೆ ಪಡೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿದರೆ, ಆರ್ಸಿಬಿ ತಂಡ ಪ್ಲೇ ಆಫ್ ರೇಸ್ನಿಂದ ಹೊರಗುಳಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ರಾಜಸ್ಥಾನ್ ತಂಡಕ್ಕೆ ಜೋಫ್ರಾ ಆರ್ಚರ್ ಶೂನ್ಯಕ್ಕೆ ನಿರ್ಗಮಿಸಿ ಆರಂಭಿಕ ಆಘಾತ ನೀಡಿದರು. ಬಳಿಕ ಒಂದಾದ ನಾಯಕ ಅಜಿಂಕ್ಯ ರಹಾನೆ ಹಾಗೂ ರಾಹುಲ್ ತ್ರಿಪಾಠಿ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆರ್ಸಿಬಿ ಬೌಲರ್ಗಳನ್ನು ಕಾಡಿದ ಈ ಜೋಡಿ 2ನೇ ವಿಕೆಟ್ಗೆ 99 ರನ್ಗಳ ಕಾಣಿಕೆ ನೀಡಿದರು. 33 ರನ್ ಗಳಿಸಿ ರಹಾನೆ ಔಟ್ ಆದರೆ ಬಂದ ಬೆನ್ನಲ್ಲೆ ಸಂಜು ಸ್ಯಾಮ್ಸನ್ ಸಹ ಶೂನ್ಯಕ್ಕೆ ನಿರ್ಗಮಿಸಿದರು. ಇತ್ತ ಎಚ್ಚರಿಕೆಯ ಆಟವಾಡುತ್ತಿದ್ದ ರಾಹುಲ್ ತ್ರಿಪಾಠಿ ಅರ್ಧಶತಕ ಗಳಿಸಿ ಹೆನ್ರಿಚ್ ಕ್ಲಾಸೆನ್ ಅವರ ಜೊತೆಗೂಡಿ ರನ್ ಕಲೆಹಾಕಲು ಮುಂದಾದರು. 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್ನೊಂದಿಗೆ 32 ರನ್ ಗಳಿಸಿದ್ದ ಕ್ಲಾಸೆನ್ ಅವರು ಸಿರಾಜ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೊನೆ ಕ್ಷಣದಲ್ಲಿ ತ್ರಿಪಾಠಿ ಹಾಗೂ ಕೃಷ್ಣಪ್ಪ ಗೌತಮ್ ಬ್ಯಾಟ್ ಬೀಸಿದ ಪರಿಣಾಮ ರಾಜಸ್ಥಾನ್ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ರಾಹುಲ್ ತ್ರಿಪಾಠಿ 58 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸ್ನೊಂದಿಗೆ 80 ರನ್ ಸಿಡಿಸಿ ಅಜೇಯರಾಗಿ ಉಳಿದರು. ಆರ್ಸಿಬಿ ಪರ ಉಮೇಶ್ ಯಾದವ್ 3 ಹಾಗೂ ಮಹ್ಮದ್ ಸಿರಾಜ್ 1 ವಿಕೆಟ್ ಕಿತ್ತರು.

ಇತ್ತ 165 ರನ್ಗಳ ಸಾಧರಣ ಮೊತ್ತ ಬೆನ್ನಟ್ಟಿದ ಆರ್ಸಿಬಿಗೆ ಕೇವಲ 4 ರನ್ ಗಳಿಸಿ ನಾಯಕ ವಿರಾಟ್ ಕೊಹ್ಲಿ ಔಟಾಗುವ ಮೂಲಕ ಆರಂಭದಲ್ಲೆ ದೊಡ್ಡ ಆಘಾತ ನೀಡಿದರು. ಬಳಿಕ 2ನೇ ವಿಕೆಟ್ಗೆ ಜೊತೆಯಾದ ಪಾರ್ಥಿವ್ ಪಟೇಲ್ ಹಾಗೂ ಎಬಿ ಡಿವಿಲಿಯರ್ಸ್ 55 ರನ್ಗಳ ಕಾಣಿಕೆ ನೀಡಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. 33 ರನ್ ಗಳಿಸಿ ಪಾರ್ಥಿವ್ ಪಟೇಲ್ ಔಟಾದರೆ ಬಂದ ಬೆನ್ನಲ್ಲೆ ಮೊಯೀನ್ ಅಲಿ(1) , ಮಂದೀಪ್ ಸಿಂಗ್(3), ಗ್ರ್ಯಾಂಡ್ಹೊಮ್((2) ಒಬ್ಬರ ಹಿಂದೆ ಒಬ್ಬರಂತೆ ಶ್ರೇಯಸ್ ಗೋಪಾಲ್ ಅವರ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸುತ್ತ ಸಾಗಿದರು. ಇತ್ತ ಏಕಾಂಗಿ ಹೋರಾಟ ನಡೆಸುತ್ತಿದ್ದ ಎಬಿ ಡಿವಿಲಿಯರ್ಸ್ ಕೂಡ 53 ರನ್ ಪೇರಿಸಿ ಔಟಾದರು. ಅಂತಿಮವಾಗಿ ಆರ್ಸಿಬಿ 19.2 ಓವರ್ಗೆ 134 ರನ್ಗೆ ಆಲೌಟ್ ಆಗುವ ಮೂಲಕ ರಾಜಸ್ಥಾನಕ್ಕೆ ಶರಣಾಯಿತು. ಆರ್ಆರ್ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಕಿತ್ತು ಮಿಂಚಿದರೆ, ಲಾಫ್ಲಿನ್ ಹಾಗೂ ಉನಾದ್ಕಟ್ ತಲಾ 2 ವಿಕೆಟ್ ಪಡೆದರು. ಈ ಮೂಲಕ ರಾಜಸ್ಥಾನ್ ತಂಡ 30 ರನ್ಗಳ ಭರ್ಜರಿ ಜಯದೊಂದಿಗೆ 14 ಅಂಕ ಗಳಿಸಿ 4ನೇ ಸ್ಥಾನಕ್ಕೇರಿದೆ.

Advertisements