City News Political

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ

ಇಡೀ ದೇಶದ ಚಿತ್ತವನ್ನೇ ತನ್ನತ್ತ ಸೆಳೆದಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಸಿಬ್ಬಂದಿ ಎಲ್ಲಾ ಮತಗಟ್ಟೆಗಳಲ್ಲೂ ಅಂತಿಮ ಹಂತದ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿದೆ.ಹಿಂದೆಂದೂ ಕಂಡು ಕೇಳರಿಯದಷ್ಟು ಕುತೂಹಲ ಹುಟ್ಟಿಸಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ ನಡೆಯುವ ಮತದಾನಕ್ಕೆ ರಾಜ್ಯದಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1628 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 71 ಪುರುಷ ಹಾಗೂ 5 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಸಚಿವ ಆಂಜನೇಯ, ಸಂಸದ ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ವ್ಯಾಪಕ ಪೊಲೀಸ್ ಬಿಗಿ ಬಂದೋಸ್ಥ ಕೈಗೊಳ್ಳಲಾಗಿದೆ. 16-ಇನ್ಸ್ಪೆಕ್ಟರ್, 5-ಡಿವೈಎಸ್ಪಿ, 28-ಪಿಎಸ್ಐ, 191- ಹೆಡ್ ಕಾನ್ಸಟೆಬಲ್, 380-ಪಿಸಿ, 80 ಸೇನಾ ಪೊಲೀಸ್, 552 ಹೋಂ ಗಾರ್ಡ್ ನೇಮಕ ಮಾಡಲಾಗಿದೆ.ಇನ್ನು ಸೂಕ್ಷ್ಮ ಮತಗಟ್ಟೆಗಳು ಹಾಗೂ ಚೆಕ್ ಪೋಸ್ಟ್ ಗಳಿಗಾಗಿ ಸಿಪಿಎಂಎಫ್ನ 10 ಕಂಪನಿಗಳನ್ನ ನೇಮಿಸಲಾಗಿದೆ. ಹೆಚ್ಚಿನ ಬಂದೋಬಸ್ಥಗಾಗಿ ಪ್ಯಾರಾ ಮಿಲಿಟರಿ ಪೋರ್ಸ್ ಕೂಡ ಬಳಸಿಕೊಳ್ಳಲಾಗಿದೆ.ಕಾಫಿನಾಡು ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನಿಂದ ಮತಯಂತ್ರಗಳನ್ನು ಜಿಲ್ಲೆಯ 1210 ಮತಗಟ್ಟೆಗಳಿಗೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 1210 ಮತಗಟ್ಟೆಗಳಿದ್ದು 115 ದುರ್ಬಲ ಹಾಗೂ 261 ಕ್ಲಷ್ಟಕರವಾದ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ 39 ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ 39 ಮತಗಟ್ಟೆಗಳಿದ್ದು ಅಲ್ಲಿಯೂ ಸಹ ಸೂಕ್ತ ಭದ್ರತೆ ನೀಡಲಾಗಿದೆ. 20 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದೆ.

ಇನ್ನು ಹಾಸನ ನಗರದ ಸರ್ಕಾರಿ ಕಲಾಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 14,33,045 ಮತದಾರರಿದ್ದು, 1978 ಮತಗಟ್ಟೆ ಸ್ಥಾಪಿಸಲಾಗಿದೆ. 10, 910 ಮಂದಿ ಸಿಬ್ಬಂದಿಯನ್ನ ಚುನಾವಣಾ ಪ್ರಕ್ರಿಯೆಗೆ ನೇಮಕಮಾಡಲಾಗಿದೆ. ಇನ್ನು ಮತಗಟ್ಟೆಗೆ ಬೇಕಾದ ಪರಿಕರಗಳನ್ನ ಕೊಂಡೂಯ್ಯಲು ಕೆಎಸ್ಆರ್ಟಿಸಿ, ಮಿನಿಬಸ್, ಟೆಂಪೋ ಟ್ರ್ಯಾಕ್ಸ್ ಸೇರಿದಂತೆ ಒಟ್ಟು 961 ವಾಹನಗಳನ್ನ ಬಳಕೆ ಮಾಡಿಕೊಂಡಿದೆ.ಅಲ್ಲದೆ 31 ಡಿವೈಎಸ್ಪಿ, 31 ಸಿಪಿಐ, 106 ಪಿಎಸ್ಐ, 150 ಎಎಸ್ಐ, 1, 200 ಕಾನ್ಸ್ಟೇಬಲ್ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಇನ್ನು ಯಾದಗಿರಿಯ ಸುರಪುರ, ಶಹಾಪುರ, ಗುರುಮಠಕಲ್ ಹಾಗೂ ಯಾದಗಿರಿ ನಾಲ್ಕು ಕ್ಷೇತ್ರಗಳಿದ್ದು, ಒಟ್ಟು 40 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.

8 ಪಿಂಕ್ ಮತದಾನ ಕೇಂದ್ರ ಹಾಗೂ ಮಾದರಿ ಮತದಾನ ಕೇಂದ್ರ ಕೂಡ ತೆರೆಯಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಯಲು ಪೊಲೀಸ್ ಇಲಾಖೆ ಕೂಡ ವ್ಯಾಪಕ ಭದ್ರತೆ ಕಾರ್ಯ ಕೈಗೊಂಡಿದೆ.ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 11, 495 ಸಿಬ್ಬಂದಿ ನಿಯೋಜಿಸಲಾಗಿದೆ. ಭದ್ರತೆಗಾಗಿ ಪೊಲೀಸ್, ಗೃಹರಕ್ಷಕ, ಅರೆಸೇನೆ ಪಡೆ ಬಳಕೆ ಮಾಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿನ್ನೆ ಸಂಜೆಯಿಂದ ಮೇ13ರ ಬೆಳಗ್ಗೆ 6ರವರೆಗೆ ಮದ್ಯ ನಿಷೇದ ಮಾಡಲಾಗಿದ್ದು, ಒಂದು ವೇಳೆ ಮದ್ಯ ಮಾರಾಟ ಕಂಡು ಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಸ್ಪಿ ಚೇತನ್ ತಿಳಿಸಿದ್ದಾರೆ.ಒಟ್ಟಾರೆ, ಈ ಬಾರಿ ಶಾಂತಿಯುತ ಮತ್ತು ನಿರ್ಭೀತ ಮತದಾನ ನಡೆಸಲು ಚುನಾವಣೆ ಆಯೋಗ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಇದಕ್ಕೆ ಜನರು ಎಷ್ಟರ ಮಟ್ಟಿಗೆ ಸಹಕಾರ ನೀಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.