Sports

ಹಾಲಿ ಚಾಂಪಿಯನ್ ಮುಂಬೈಗೆ ಮುಖಭಂಗ: ತವರಲ್ಲಿ ಗೆದ್ದು ಬಿಗಿದ ಆರ್ಸಿಬಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ತಮ್ಮ ನಾಯಕ ವಿರಾಟ್ ಕೊಹ್ಲಿಯನ್ನು ನಿರಾಶೆಗೊಳಿಸಲಿಲ್ಲ. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು 14 ರನ್ ಗಳಿಂದ ಆರ್ಸಿಬಿ ಜಯಕ್ಕೆ ಬೌಲರ್ ಗಳು ಕಾರಣರಾದರು. ಜತೆಗೆ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ನ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಎಡಿಬಿ ಅನುಪಸ್ಥಿತಿಯಲ್ಲಿ ಮನನ್ ವೋಹ್ರಾ (31 ಎಸೆತಗಳಲ್ಲಿ 45 ರನ್), ವಿರಾಟ್ ಕೊಹ್ಲಿ 26 ಎಸೆತಗಳಲ್ಲಿ 32 ರನ್, ಬ್ರೆಂಡನ್ ಮೆಕಾಲಮ್ 37 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತವನ್ನು ದಾಖಲಿಸಲು ನೆರವಾದರು.

ಆರ್ ಸಿ ಬಿ ನೀಡಿದ ಟಾರ್ಗೆಟ್ ನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರ್ ಸಿ ಬಿ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಕ್ರಮಾಂಕದ ಆಟಗಾರರು, ರೋಹಿತ್ ಶರ್ಮಾ ಸೇರಿದಂತೆ ಭರವಸೆಯ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರೆ, ಜೆಪಿ ಡ್ಯೂಮಿನಿ 29 ಎಸೆತಗಳಲ್ಲಿ 23 ರನ್ ಹಾಗೂ ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 50 ರನ್ ಗಳಿಸಿ ಆರ್ ಸಿ ಬಿ ಯನ್ನ ಎದುರಿಸಲು ಯತ್ನಿಸಿದರಾದರೂ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು..