Political

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ: ಮಹಾರಾಷ್ಟ್ರ ಮಾಜಿ ಸಿ.ಎಂ ಪೃಥ್ವಿರಾಜ್ ಚೌಹಾಣ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಲಿದ್ದು ಯಾವುದೇ ಪಕ್ಷದ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಸಿದ್ದಂತವೇನು ಎಂಬುದು ಬಹಿರಂಗವಾಗಿದೆ. ಆದುದರಿಂದ, ಚುನಾವಣಾ ಪೂರ್ವ ಮೈತ್ರಿಯ ಅಗತ್ಯ ನಮಗಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 5 ವರ್ಷಗಳ ಕಾಲ ಕಾಂಗ್ರೆಸ್ ಸರಕಾರ ಸ್ವಚ್ಛ, ಪಾರದರ್ಶಕ ಆಡಳಿತವನ್ನು ನೀಡಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.
ನಿನ್ನೆ ಮಂಗಳೂರಿನಲ್ಲಿ ಬಿಡುಗಡೆಯಾದ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ನಾವು ಈಡೇರಿಸಲು ಬದ್ಧರಾಗಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯು ರಾಜ್ಯದ ಭವಿಷವನ್ನು ನಿರ್ಮಾಣ ಮಾಡುವತ್ತ ಕೇಂದ್ರೀಕೃತವಾಗಿದೆ. ಆದರೆ, ಬಿಜೆಪಿಯವರಿಗೆ ಕರ್ನಾಟಕದ ಭವಿಷ್ಯದ ಕುರಿತು ಯಾವ ಸ್ಪಷ್ಟ ಕಲ್ಪನೆಗಳು ಇಲ್ಲ ಎಂದು ಪೃಥ್ವಿರಾಜ್ ಚೌಹಾಣ್ ದೂರಿದರು.
ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ 2.19 ಲಕ್ಷ ಕೋಟಿ ರೂ. ಅನುದಾನವನ್ನು ನೀಡಿದೆ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ರಾಜ್ಯಕ್ಕೆ ಸಿಕ್ಕುರುವುದು 98 ಸಾವಿರ ಕೋಟಿ ರೂ ಗಳು ಮಾತ್ರ. ರಾಜ್ಯದ ಬಜೆಟ್ ಗಾತ್ರವು ದೊಡ್ಡದಿದೆ. ಸರಿಯಾದ ಅಂಕಿ ಅಂಶಗಳ ಕೊರತೆಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಅಲ್ಲಿನ ಮುಖ್ಯಮಂತ್ರಿ ವಸುಂಧರಾ ರಾಜೇ ಇಲ್ಲಿಗೆ ಬಂದು ಪ್ರಚಾರ ಮಾಡುವ ಸಾಧ್ಯತೆಗಳಿಲ್ಲ.
ರಾಜಸ್ಥಾನದಲ್ಲಿ ಅವರು ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ಕರ್ನಾಟಕದ ನಂತರ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಪೃಥ್ವಿರಾಜ್ ಚೌಹಾಣ್ ಹೇಳಿದರು.
ಯಡಿಯೂರಪ್ಪ, ರೆಡ್ಡಿ ಸಹೋದರರ ವರ್ತನೆಯನ್ನು ರಾಜ್ಯದ ಜನತೆ ನೋಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕತ್ವದ ಮೇಲೆ ಆ ಪಕ್ಷದ ವರಿಷ್ಠರಿಗೆ ನಂಬಿಕೆ ಇಲ್ಲದಂತಾಗಿದೆ. ಆದುದರಿಂದ, ಬೇರೆ ರಾಜ್ಯಗಳಿಂದ ನಾಯಕರನ್ನು ಕರೆಸಿ ಪ್ರಚಾರ ಮಾಡಿಸಲು ಮುಂದಾಗಿರಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಗೋರಖ್ ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಬಂದ ನಂತರ ಅವರು ಪ್ರಭಾವಿ ನಾಯಕರಾಗಿ ಉಳಿದಿಲ್ಲ ಎಂದು ಹೇಳಿದರು.

-ರಂಜಿತಾ ಗೌಡ ನ್ಯೂಸ್ ಇಂಡಿಯಾ ಬೆಂಗಳೂರು-

Advertisements